ಜಯವಿಜಯರು
	ಕರ್ದಮಬ್ರಹ್ಮನ ಸಂದರ್ಶನಮಾತ್ರದಿಂದ ತೃಣ ಬಿಂದುವಿನ ಮಗಳಾದ ದೇವಹೂತಿಯಲ್ಲಿ ಜನಿಸಿದ ಅವಳಿಮಕ್ಕಳು. ಇವರು ವಿಷ್ಣುವಿನ ಪರಮಭಕ್ತರು ಧರ್ಮಶೀಲರು ಮತ್ತು ಜಿತೇಂದ್ರಿಯರು. ಪ್ರತಿ ದಿನವೂ ಪೂಜೆಯ ಸಮಯದಲ್ಲಿ ವಿಷ್ಣು ಇವರಿಗೆ ದರ್ಶನ ಕೊಡುತ್ತಿದ್ದನಂತೆ. ಮರುತ್ತನೆಂಬ ರಾಜ ಅಚರಿಸಿದ ಯಾಗವೊಂದರಲ್ಲಿ ಈ ಸಹೋದರರು ಪಾಲ್ಗೊಂಡು ವಿಪುಲ ಧನಧಾನ್ಯಗಳನ್ನೂ ದೇವತೆಗಳ ಮೆಚ್ಚುಗೆಯನ್ನೂ ಪಡೆಯುತ್ತಾರೆ. ತಾವು ಸಂಪಾದಿಸಿದುದನ್ನು ಹಂಚಿಕೊಳ್ಳುವಾಗ ಇವರಲ್ಲಿ ಪರಸ್ಪರ ವೈಮನಸ್ಯವುಂಟಾಗಿ ವಿಜಯನನ್ನು ಜಯಮೊಸಳೆಯಾಗೆಂದು ಶಪಿಸುತ್ತಾನೆ. ಹಾಗೆಯೇ ಜಯನಿಗೆ ವಿಜಯ ಆನೆಯಾಗೆಂದು ಶಾಪಕೊಡುತ್ತಾನೆ. ಪ್ರಜೆಯ ಸಮಯದಲ್ಲಿ ಪ್ರತ್ಯಕ್ಷನಾದ ವಿಷ್ಣುವಿಗೆ ಆ ಪ್ರಸಂಗವನ್ನು ಇವರೇ ನಿವೇದಿಸಿಕೊಳ್ಳುತ್ತಾರೆ. ತನ್ನ ಭಕ್ತರ ಶಾಪಸುಳ್ಳಾಗಲಾರದೆಂದು ಹೇಳಿ, ಅದನ್ನು ಇವರು ಸ್ವಲ್ಪಕಾಲ ಅನುಭವಿಸಿದ ತರುವಾಯ ವಿಮೋಚನೆ ಮಾಡುವುದಾಗಿ ವಿಷ್ಣು ಇವರಿಗೆ ಭರವಸೆ ಕೊಡುತ್ತಾನೆ. ಜಯ ವಿಜಯರು ಗಂಡಕೀ ನದಿಯ ತೀರದಲ್ಲಿ ಕ್ರಮವಾಗಿ ಆನೆ ಮೊಸಳೆಗಳಾಗಿ ಜನ್ಮತಾಳುತ್ತಾರೆ. ಒಮ್ಮೆ ಆನೆ ರೂಪದ ಜಯ ನದಿಯಲ್ಲಿ ನೀರು ಕುಡಿಯಲು ಹೋದಾಗ, ಮೊಸಳೆಯಾಗಿದ್ದ ವಿಜಯ ಅವನನ್ನು ಹಿಡಿಯುತ್ತಾನೆ; ಜಯ ವಿಷ್ಣುವಿನ ಮೊರೆಹೋಗುತ್ತಾನೆ. ವಿಷ್ಣು ಪ್ರತ್ಯಕ್ಷನಾಗಿ ತನ್ನ ಚಕ್ರಾಯುಧದಿಂದ ಇಬ್ಬರನ್ನೂ ವಧಿಸಿ ಸಾರೂಪ್ಯ ಮುಕ್ತಿಯನ್ನು ಕೊಟ್ಟು ಜಯವಿಜಯ ಎಂಬ ಹೆಸರಿನಿಂದಲೇ ಇವರನ್ನು ವೈಕುಂಠದ ದ್ವಾರಪಾಲಕರನ್ನಾಗಿ ಮಾಡುತ್ತಾನೆ. ಇವರು ಆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಒಮ್ಮೆ ವೈಕುಂಠಕ್ಕೆ ಬಂದ ಸನಕಾದಿ ಮುನಿಗಳನ್ನು ದ್ವಾರದಲ್ಲಿ ತಡೆಯುತ್ತಾರೆ. ಅದರಿಂದಕುಪಿತರಾದ ಮುನಿಗಳು ಇವರನ್ನು ಶಪಿಸಿದ್ದರ ಪರಿಣಾಮವಾಗಿ ಇವರು ಭೂಲೋಕದಲ್ಲಿ ಮೂರು ಜನ್ಮವೆತ್ತುವಂತಾಗುತ್ತದೆ. ಒಂದು ಎರಡು ಮೂರನೆಯ ಜನ್ಮಗಳಲ್ಲಿ ಕ್ರಮವಾಗಿ ಅವರು ಹಿರಣ್ಯಾಕ್ಷ, ಹಿರಣ್ಯಕಶಿಪು; ರಾವಣ, ಕುಂಭಕರ್ಣ; ಶಿಶುಪಾಲ, ದಂತವಕ್ತ್ರ-ಇವರ ರೂಪದಲ್ಲಿ ಜನಿಸುತ್ತಾರೆ; ಅಲ್ಲದೆ ಅನುಕ್ರಮವಾಗಿ ವರಾಹ ನೃಸಿಂಹರಿಂದ, ಶ್ರೀರಾಮನಿಂದ, ಶ್ರೀಕೃಷ್ಣನಿಂದ ಹತರಾಗಿ ಪುನಃ ವಿಷ್ಣು ಸಾನ್ನಿಧ್ಯವನ್ನು ಪಡೆಯುತ್ತಾರೆ. 		   (ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ